ನರ್ಯೇಷ್ಕಿ, ವಸೀಲಿ ತ್ರಫೀಮೋವಿಚ್ -
	1780-1825. ಪ್ರಸಿದ್ಧ ಕಾದಂಬರಿಕಾರ. ರಷ್ಯನ್ ಕಾದಂಬರಿಯ ಪಿತಾಮಹ ಎಂದು ಈತನನ್ನು ಪ್ರಸಿದ್ಧ ವಿಮರ್ಶಕ ಬೆಲಿನ್‍ಸ್ಕಿ ಕೊಂಡಾಡಿದ್ದಾನೆ. ಹುಟ್ಟಿದ್ದು ಪಲ್ತಾವ್‍ಸ್ಕಿ ಪ್ರಾಂತ್ಯದ ಮೀರ್‍ಗರದ್‍ಸ್ಕೊಯ್ ಜಿಲ್ಲೆಯಲ್ಲಿ. ಈತನ ವಿದ್ಯಾಭ್ಯಾಸ ಜೆಸೂಯಿತ್ ಪಾಠಶಾಲೆಯಲ್ಲಿ, ಅನಂತರ ಮಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು.

	ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಈತ ನರೇಷಿಯಜೋರ್ನಿಗೋದ್ (ಕರಾಳ ವರ್ಷ) ಎಂಬ ಕಾದಂಬರಿಯನ್ನು ಬರೆದ. ಆ ಕಾಲದ ರೈತಾಪಿವರ್ಗ ಮತ್ತು ಶ್ರೀಮಂತ ನೊಬಲ್ಲುಗಳ ನಡುವೆ ನಡೆದ ಹೋರಾಟವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಜಾರ್ಜಿಯನ್ ಶ್ರೀಮಂತ ನೊಬಲ್ಲುಗಳ ರಾಜಕುಮಾರರ ಅಶಿಸ್ತಿನ ಜೀವನವನ್ನೂ ಜನತೆಯ ದಾರುಣ ಚಿತ್ರವನ್ನೂ ಹಾಳುಬಿದ್ದ ದೇಶಗಳ ಸ್ಥಿತಿಗಳನ್ನೂ ಈತ ಅದರಲ್ಲಿ ವರ್ಣಿಸಿದ್ದಾನೆ.

	ಹೆಚ್ಚಿನ ಖ್ಯಾತಿ ತಂದ ಈತನ ಮತ್ತೊಂದು ಕಾದಂಬರಿ ರಸೀಸ್ಕಿಷೀಲ್ ಬ್ಲಾಸ್ (ರಷ್ಯದ ಷೀಲ್ ಬ್ಲಾಸ್) ಎಂಬುದರಲ್ಲಿ ಜೀತದಾಳುಗಳ ವಾಸ್ತವ ಜೀವನವನ್ನು ಹಾಗೂ ಕುಲೀನರ ವೈಭವ ಜೀವನವನ್ನು ವಿಡಂಬನಾತ್ಮಕವಾಗಿ ಚಿತ್ರಿತವಾಗಿದೆ.

	1824ರಲ್ಲಿ ಈತ ಬೂರ್ಸಾಕೆ (ಜೆಸೂಯಿತ್ ಬೋಧಕ) ಎಂಬ ಕಾದಂಬರಿಯನ್ನೂ 1825ರಲ್ಲಿ ದ್ವಾ ಇವಾನ (ಇಬ್ಬರು ಇವಾನರು) ಎಂಬ ಕಥನ ಕವನವನ್ನೂ ಬರೆದ; ಬಗ್ದಾನ ಹ್ಮೇಲಿತ್‍ಸ್ಕವನ ಕಾಲದ ಉಕ್ರೈನಿನ ಜೀವನವನ್ನು ಬೂರ್ಸಾಕ್ ಚಿತ್ರಿಸಿದರೆ, ದ್ವಾ ಇವಾನ ಒಂದು ಹೆಜ್ಜೆ ಮುಂದೆ ಹೋಗಿ ವಾಸ್ತವತಾವಾದವನ್ನು ಪ್ರತಿಧ್ವನಿಸುತ್ತದೆ. ಈ ಎರಡೂ ಕೃತಿಗಳಲ್ಲೂ ಕೃತಿಕಾರನ ಪ್ರತಿಭೆ ಮತ್ತು ಸ್ವೋಪಜ್ಞತೆ ಎದ್ದು ಕಾಣುತ್ತದೆ.				
		(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ